ಬ್ಯಾಂಕಿನ ಸಂಸ್ಥಾಪನಾ ಆಡಳಿತ ಮಂಡಳಿ.


ಕ್ರ.ಸಂ. ಹೆಸರು ಹುದ್ದೆ
1 ಶ್ರೀ ಹೆಚ್. ಜೆ. ಆನಂದ ರಾಮ್ ಅಧ್ಯಕ್ಷರು
2 ಶ್ರೀ ಎ. ವಾಸುದೇವ ರಾವ್ ಉಪಾಧ್ಯಕ್ಷರು
3 ಶ್ರೀ ಬಿ. ವಿಠ್ಠಲ ಶೆಟ್ಟಿ ಗೌರವ ಕಾರ್ಯದರ್ಶಿ
4 ಶ್ರೀ ಎಸ್. ಲಕ್ಷ್ಮೀನಾರಾಯಣ ಗೌರವ ಖಂಜಾಜಿ
5 ಶ್ರೀ ಕೆ.ಎಸ್. ಶ್ರೀಧರನ್ ಸಮಿತಿ ಲೆಕ್ಕಪರಿಶೋಧಕ
6 ಶ್ರೀ ಟಿ.ಡಿ. ಶಿವಪ್ರಕಾಶ ನಿರ್ದೇಶಕರು
7 ಶ್ರೀ ಮಂಜುನಾಥಯ್ಯ ನಿರ್ದೇಶಕರು
8 ಶ್ರೀ ಕೆ.ಗುರುರಾಜಾಚರ್ ನಿರ್ದೇಶಕರು
9 ಶ್ರೀ ಎಮ್.ಎಸ್.ವೆಂಕಟರಮಣ ಕಾರಂತ ನಿರ್ದೇಶಕರು
10 ಶ್ರೀ ಕೆ.ಎಲ್.ಐತಾಳ ನಿರ್ದೇಶಕರು
11 ಶ್ರೀ ಜಿ.ರಾಮಕೃಷ್ಣ ಐತಾಳ ನಿರ್ದೇಶಕರು
12 ಶ್ರೀ ಕೆ.ರಾಮಚಂದ್ರ ರಾವ್ ನಿರ್ದೇಶಕರು
13 ಶ್ರೀ ಕೆ.ಆರ್.ನಾಗಪ್ಪಯ್ಯ ನಿರ್ದೇಶಕರು
14 ಶ್ರೀ ಕೆ.ಸುಬ್ರಾಯ ಮಂಜ ನಿರ್ದೇಶಕರು
15 ಶ್ರೀ ಕೆ.ಶಂಕರ ರಾವ್ ನಿರ್ದೇಶಕರು

ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್ ನಿಯಮಿತ

ಶ್ರೀ ಹೆಚ್. ಜೆ. ಆನಂದ ರಾಮ್

ಸಂಸ್ಥಾಪಕ ಅಧ್ಯಕ್ಷರು

ಹಿಮಾಲಯದ ಉತ್ತುಂಗ ಪರ್ವತ - ಶಿಖರವನ್ನು ತೇನ್ ಸಿಂಗ್ ಆರೋಹಿಸುವ ವೇಳೆಗಾಗಲೆ. ' ಚಾಯ್ '. ' ಚಾಯ್ ' ಎಂದು ಅವನನ್ನು ಆಹ್ವಾನಿಸಲು ಕರಾವಳಿಯ ಜನತೆ ಅಲ್ಲಿರುತ್ತಾರೆ ಎಂಬ ಅಭಿಮಾನದ ಮಾತಿದೆ. ಧೈರ್ಯೋತ್ಸಾಹಿ ಜತೆಗೆ ಧೀಶಕ್ತಿಯುಳ್ಳ ದಕ್ಷಿಣ ಕನ್ನಡದ ಜನತೆ , ತಮ್ಮ ಜೀವನೋಪಾಯಕ್ಕಾಗಿ ತಮ್ಮ ಹುಟ್ಟೂರು ತೊರೆದು ಎಷ್ಟೋ ಜನ ಪಟ್ಟಣ ಸೇರಬೇಕಾಯಿತು. ಆದರೆ ಅದಕ್ಕೊಂದು ಸಾರ್ಥಕ್ಯ ಪಡೆದುಕೊಂಡಿತು ಆ ಮಹಾಜನತೆ ಹೋಟೆಲ್ ಉದ್ಯಮವನ್ನು ನಗರ ಪಟ್ಟಣಗಳಲ್ಲಿ ಅಬಿವೃದ್ಧಿ ಪಡಿಸಲು ಮುಂದಾಯಿತು. ಆದರೆ ಕಾಲಕ್ರಮದಲ್ಲಿ ಹಣಕಾಸು ನೆರವು ಪಡೆದುಕೊಳ್ಳಲು ಹೆಣಗಾಡಬೇಕಾಯಿತು. ಈ ಹಿನ್ನಲೆಯಲ್ಲಿ ವ್ಯವಸ್ಥಿತವಾಗಿ ಆರ್ಥಿಕ ನೆರವು ಪೂರೈಸಿಕೊಳ್ಳಲು ತಮ್ಮದೇ ಆದ ಬ್ಯಾಂಕೊಂದನ್ನು ಆರಂಭಿಸಲು ಸಣ್ಣ ಮತ್ತು ಮಧ್ಯಮ ಗಾತ್ರದ ಹೋಟೆಲ್ ಉದ್ದಿಮೆದಾರರ ಆಲೋಚನೆಯ ಫಲಶ್ರುತಿಯಾಗಿ " ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್ " 24-11-1966 ರಂದು ವಿರಾಜಮಾನವಾಗಿ ಅಸ್ತಿತ್ವಕ್ಕೆ ಬಂದಿತು.

ಹಿರಿಯ ಹೋಟೆಲ್ ಉದ್ಯಮಿ ಶ್ರೀ ಎಸ್. ಲಕ್ಷ್ಮೀನಾರಾಯಣ ರಾಯರ ಕನಸಿನ ಕೊಸಿದು. ಸಮಾನ ಮನಸ್ಕರಾದ ಶ್ರೀ ಕೆ. ಎಲ್. ಐತಾಳ್, ಶ್ರೀ ಹೆಚ್. ಜೆ. ಆನಂದ ರಾಮ್, ಶ್ರೀ ಎ. ವಾಸುದೇವ ರಾವ್, ಶ್ರೀ ಬಿ. ವಿಠ್ಠಲ ಶೆಟ್ಟಿ, ಶ್ರೀ ಜಿ. ಅರ್. ಐತಾಳ್, ಶ್ರೀ ಕೆ. ರಾಮಚಂದ್ರ ರಾವ್, ಶ್ರೀ ಕೆ. ಸುಬ್ರಾಯ ಮಂಜ, ಶ್ರೀ ಎಂ. ಎಸ್. ವೆಂಕಟರಮಣ ಕಾರಂತ, ಶ್ರೀ ಗುರುರಾಜಾಚರ್, ಶ್ರೀ ಕೆ. ಶಂಕರ ರಾವ್, ಶ್ರೀ ಕೆ. ಅರ್. ನಾಗಪ್ಪಯ್ಯ, ಶ್ರೀ ಟಿ.ಡಿ. ಶಿವಪ್ರಕಾಶ್, ಶ್ರೀ ಎಂ. ಮಂಜುನಾಥಯ್ಯ ಹಾಗೂ ಶ್ರೀ ಕೆ.ಎಸ್. ಶ್ರೀಧರನ್ ಇವರೆಲ್ಲರ ಸಾಂಘಿಕ ನಿಷ್ಠೆ ಮೂಲ ಬಂಡವಾಳದ ಭದ್ರ ಬುನಾದಿ ಹಾಕಿಕೊಟ್ಟಿತು.

ಬೆಂಗಳೂರಿನ ಚಿಕ್ಕಪೇಟೆಯಲ್ಲಿರುವ ಮಲ್ಲಪ್ಪ ಹೊಸ ಮಾರುಕಟ್ಟೆ ಕಟ್ಟಡದಲ್ಲಿ ಶುಭಾರಂಭವಾದ ಬ್ಯಾಂಕಿನ ಉದ್ಘಾಟನೆಯನ್ನು ಅಂದಿನ ಸಚಿವರಾಗಿದ್ದ ಡಾಕ್ಟರ್ ನಾಗಪ್ಪ ಆಳ್ವ ನೆರವೇರಿಸಿ ಕೊಟ್ಟರು. ಅದೇ ದಿನ ಉತ್ಸಾಹಿ 121 ಜನ ಉದ್ಯಮಶೀಲರು ಬ್ಯಾಂಕಿನ ಸದಸ್ಯತ್ವ ಪಡೆದುಕೊಂಡರು. ಅದೇ ವಿತ್ತೀಯ ವರ್ಷದೊಳಗೆ 1,28,751/- ರೂಪಾಯಿಗಳ ಸಂಗ್ರಹ ಜತೆಗೆ 1,12,607/- ರೂಪಾಯಿಗಳ ಮುಂಗಡ ಕೂಡ ವಿತರಣೆಯಾಯಿತು. ಬ್ಯಾಂಕಿನ ಸಂಸ್ಥಾಪಕ ನಿರ್ದೇಶಕರುಗಳ ಪೈಕಿ ಶ್ರೀ ಎಚ್.ಜೆ. ಆನಂದರಾಮ್ ಅವರನ್ನು ಬ್ಯಾಂಕಿನ ಪ್ರಪ್ರಥಮ ಅಧ್ಯಕ್ಷರನ್ನಾಗಿಯೂ; ಶ್ರೀ ಎ. ವಾಸುದೇವ ರಾಯರನ್ನು ಉಪಾಧ್ಯಕ್ಷರನ್ನಾಗಿಯೂ; ಶ್ರೀ ಬಿ. ವಿಠ್ಠಲ ಶೆಟ್ಟಿ ಅವರನ್ನು ಗೌರವ ಕಾರ್ಯದರ್ಶಿಗಳನ್ನಾಗಿಯೂ; ಶ್ರೀ ಎಸ್. ಲಕ್ಷ್ಮೀನಾರಾಯಣ ರಾಯರನ್ನು ಕೋಶಾಧ್ಯಕ್ಷರನ್ನಾಗಿಯೂ ಆಯ್ಕೆಮಾಡಿಕೊಳ್ಳಲಾಯಿತು.

ಇತರೆಡೆ ಹಣಕಾಸು ನೆರವು ಪಡೆದುಕೊಳ್ಳುವಲ್ಲಿ ಸಂಕಷ್ಟವನ್ನು ಎದುರಿಸುತ್ತಿದ್ದ ಉದ್ಯಮಶೀಲರು ಸಾಗರೋಪಾದಿಯಲ್ಲಿ ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕಿನ ಕಡೆ ಮುಖಮಾಡಿದರು. ಬಂಡವಾಳ ನಿರಂತರವಾಗಿ ಹರಿದು ಬರಲು ಆರಂಭವಾಯಿತು. ಕಾರ್ಯ ಬಾಹುಳ್ಯ ಅಧಿಕಗೊಂಡಿತು. ಸ್ಥಳ ಸಂಕುಚಿತಗೊಂಡ ಕಾರಣ ವ್ಯಾವಹಾರಿಕ ಸ್ಥಳವನ್ನು ಬಳೇಪೇಟೆ ಮುಖ್ತರಸ್ತೆಯಲ್ಲಿರುವ ನಂ. 181, ಸೀತಾ ನಿವಾಸ ಕಟ್ಟಡಕ್ಕೆ ವರ್ಗಾಯಿಸಲಾಯಿತು. ದಿನ ನಡೆದಂತೆ ಆ ಸ್ಥಳವೂ ಸಾಲದಾಗಿ ಪೋಲಿಸ್ ರಸ್ತೆಯಲ್ಲಿರುವ ಸುಧಾ ಸಂಕೀರ್ಣ ಕಟ್ಟಡದ ನಂ. 112, ಮೊದಲ ಅಂತಸ್ತಿಗೆ ಸ್ಥಳಾಂತರ ಗೊಳಿಸಲಾಯಿತು.

ವ್ಯಾವಹಾರಿಕ ಕಾರ್ಯಚಟುವಟಿಕೆ ಏರುಗತಿಯಲ್ಲೇ ಸಾಗಿದ್ದರಿಂದ ಬ್ಯಾಂಕ್ ತನ್ನದೇ ಆದ ಸ್ವಂತ ಕಟ್ಟಡವನ್ನು ಹೊಂದಬೇಕಾದ ಅನಿವಾರ್ಯತೆ ಉಂಟಾಗಿ ಚಾಮರಾಜಪೇಟೆ 2ನೇ ಅಡ್ಡರಸ್ತೆಯಲ್ಲಿರುವ 234ನೇ ಸಂಖ್ಯೆಯ 85 ಅಡಿ * 31 ಅಡಿ ವಿಸ್ತೀರ್ಣದ ನಿವೇಶನವನ್ನು ಖರೀದಿಸಲಾಯಿತು. 15-01-1990 ರಲ್ಲಿ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಲಾಯಿತು. ಬ್ಯಾಂಕ್ ಸ್ಥಾಪನೆಗೆ ಮೂಲ ಕಾರಣಕರ್ತರಾದ ಶ್ರೀ ಎಸ್. ಲಕ್ಷ್ಮೀನಾರಾಯಣ ರಾಯರ ಅಮೃತ ಹಸ್ತದಿಂದ ಶಿಲಾನ್ಯಾಸ ನೆರವೇರಿತು. ಅಂದು ಬ್ಯಾಂಕಿನ ಅಧ್ಯಕ್ಷರಾಗಿದ್ದವರು ಶ್ರೀ ಎ. ಪಿ. ವೈಕುಂಠ ಕಾರಂತರು. ಸ್ವಂತ ಕಟ್ಟಡಕ್ಕೆ ಬ್ಯಾಂಕನ್ನು ವರ್ಗಾಯಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಸಹಕಾರ ಇಲಾಖೆಯ ಅನುಮತಿ ಪಡೆದು 29-08-1992 ರಂದು ಬ್ಯಾಂಕಿನ ನೂತನ ಕಟ್ಟಡ "ಸಹಕಾರ ಸೌರಭ" ಉದ್ಘಾಟಿಸಲಾಯಿತು. ಅಂದಿನ ಸಹಕಾರ ಖಾತೆ ಸಚಿವರಾಗಿದ್ದ ಸನ್ಮಾನ್ಯ ಎಸ್.ಆರ್. ಮೋರೆಯವರು ಉದ್ಘಾಟನೆಯನ್ನು ನೆರವೇರಿಸಿ ಕೊಟ್ಟರು.

ಬೃಹತ್ ಬೆಂಗಳೂರು ನಗರ ವ್ಯಾಪ್ತಿಯ ಕಾರ್ಯಕ್ಷೇತ್ರ ಹೊಂದಿರುವ ಈ ಬ್ಯಾಂಕ್ ನಗರದ ನಾಲ್ಕೂ ದಿಕ್ಕಿನಲ್ಲಿ ತನ್ನ ಶಾಖೆಗಳನ್ನು ಆರಂಭಿಸಲು ಭಾರತೀಯ ರಿಸರ್ವ್ ಬ್ಯಾಂಕಿನ ಮುಂದೆ ಸುಧೀರ್ಘ ಪ್ರಸ್ತಾವನೆ ಸಲ್ಲಿಸಲಾಗಿ, ಆರಂಭದಲ್ಲಿ ಬಳೇಪೇಟೆ ಶಾಖೆ ತೆರೆಯಲು ಅನುಮತಿ ದೊರೆತು 22-02-1992 ರಂದು ಮೊದಲ ಶಾಖೆ ತನ್ನ ಕಾರ್ಯಚಟುವಟಿಕೆ ಶುರುಮಾಡಿತು. ಬ್ಯಾಂಕಿನ ಅಂದಿನ ಅಧ್ಯಕ್ಷರಾಗಿದ್ದ ಶ್ರೀ ಕೆ. ಎಲ್. ಐತಾಳರು ಶಾಖೆಯ ಉದ್ಘಾಟನೆ ನೆರವೇರಿಸಿದರು. ಅನಂತರದಲ್ಲಿ ಕ್ರಮವಾಗಿ ಜಯನಗರದ ಶಾಖೆಯನ್ನು 30-05-1999 ರಂದು, ರಾಜಾಜಿನಗರ ಶಾಖೆಯನ್ನು 23-08-1999 ರಂದು, ಹಲಸೂರು ಶಾಖೆಯನ್ನು 10-12-2001 ರಂದು, ಉತ್ತರಹಳ್ಳಿ ಶಾಖೆಯನ್ನು 16-01-2010 ರಂದು ಆರಂಭಿಸಲಾಯಿತು.

ಬ್ಯಾಂಕು ಆರಂಭವಾದ 24-11-1966 ರಿಂದ 30-06-1967 ರ ನಡುವಿನ 7 (ಏಳು) ತಿಂಗಳಾವಧಿಯಲ್ಲಿ ಜಮಾ - ಖರ್ಚಿನ ತಖ್ತೆಯಂತೆ 9,31,286.25, ಆಯವ್ಯಯದಲ್ಲಿ 3,676.06 ರೂಪಾಯಿಗಳ ಕೊರತೆ ಬಜೆಟ್ ಮಂಡಿತವಾಗಿ ಅದನ್ನು ಗಮನಿಸಿ ಘನ ಸರ್ಕಾರ ಪ್ರೋತ್ಸಾಹದ ದೃಷ್ಠಿಯಿಂದ ಬ್ಯಾಂಕಿನ ಆಡಳಿತೆಗೆ 1500/- ರೂಪಾಯಿಗಳ ಸಹಾಯಧನ ನೀಡಿತು. ಆರಂಭದ ವರ್ಷ 3,676.06 ರೂಪಾಯಿಗಳ ನಷ್ಟ ಅನುಭವಿಸಿದ್ದ ಈ ಬ್ಯಾಂಕ್ ಮರುವರ್ಷವೇ 1,392.02 ರೂಪಾಯಿಗಳ ಲಾಭಗಳಿಸಿತು. ಮೂರನೇ ವಿತ್ತೀಯ ವರ್ಷದಲ್ಲಿ ಅಂದರೆ 1968-69 ನೇ ಸಾಲಿನಲ್ಲಿ 13,842.87 ನಿವ್ವಳ ಲಾಭಗಳಿಸಿದ ಹಿನ್ನಲೆಯಲ್ಲಿ ಶೇಕಡ 6ರ ಪ್ರಮಾಣದಲ್ಲಿ ಲಾಭಾಂಶ ವಿತರಿಸಿತು. ಆರಂಭಿಕ ವ್ಯವಹಾರಕ್ಕೆ ಸಾಕಾಗುವಂಥ ನಿಬಂಧನೆಗಳ ರಚನೆಯ ಮೇಲೆ ಶುರುವಾದ ಈ ಬ್ಯಾಂಕ್ ತನ್ನ ಕಾರ್ಯವ್ಯಾಪ್ತಿ ವಿಸ್ತಾರಗೊಂಡಂತೆ ನಿಬಂಧನೆ ತಿದ್ದುಪಡಿಗೆ ಮುಂದಾಗಿ ಬ್ಯಾಂಕಿನ ಕಾರ್ಯಕ್ಷಮತೆಗೆ ಅಗತ್ಯವಾದ ತಿದ್ದುಪಡಿಗಳನ್ನು ಕಾಲಕಾಲಕ್ಕೆ ಅಳವಡಿಸಿಕೊಳ್ಳುತ್ತಾ ಮುನ್ನಡೆಯುತ್ತಿದೆ.

ಆರಂಭದಲ್ಲಿ ಡೆಪ್ಯುಟಿ ರಿಜಿಸ್ಟ್ರಾರ್ ಅವರ ಆದೇಶದಂತೆ ಬ್ಯಾಂಕಿನ ನಿರ್ದೇಶಕರ ಹುದ್ದೆಗೆ ಚುನಾವಣೆ ನಡೆಯುತ್ತಿರಲಿಲ್ಲ. ರಾಜ್ಯ ಸಹಕಾರ ಸಂಘಗಳ ನಿಯಮ 14(2) ನಿಬಂಧನೆ ರೀತ್ಯ 1969-70ನೇ ಸಾಲಿನಿಂದ ಬ್ಯಾಂಕಿನ ಕಾರ್ಯಕಾರಿಣಿಗೆ ಚುನಾವಣೆ ನಡೆಸುವುದು ಆರಂಭವಾಯಿತು. ಆ ನಿಯಮ ಈಗಲೂ ಪಾಲಿಸುತ್ತಾ ಬರಲಾಗುತ್ತಿದೆ.

1966ನೇ ಇಸವಿಯಲ್ಲಿ ಆರಂಭವಾದ ಈ ಬ್ಯಾಂಕ್ ಮೊದಲೆರಡು ವರ್ಷಗಳು ತನ್ನ ಸದೃಢತೆ ಕಾಪಾಡಿಕೊಳ್ಳುತ್ತಿದ್ದ ಕಾರಣ ಷೇರುದಾರರಿಗೆ ಲಾಭಾಂಶ ಘೋಷಿಸಲು ಸಾಧ್ಯವಾಗಲಿಲ್ಲ. ನಂತರದಲ್ಲಿ ಈ ದಿನದವರೆಗೂ ಬ್ಯಾಂಕು ತನ್ನ ಹಣಕಾಸಿನ ಆರೋಗ್ಯವನ್ನು ಸಂರಕ್ಷಿಸಿಕೊಂಡಿದ್ದು, ಶೇಕಡ 6 ರ ಪ್ರಮಾಣದಿಂದ ಹಿಡಿದು ಶೇಕಡ 6.25ರ ಪ್ರಮಾಣದ ಲಾಭಾಂಶವನ್ನು ಸತತ 6 ವರ್ಷಗಳ ಕಾಲ ವಿತರಿಸಿತು. ನಂತರ ಪ್ರಗತಿದಾಯಕವಾಗಿ ಮುನ್ನಡೆದು, ಮುಂದಿನ ನಾಲ್ಕು ವರ್ಷಗಳು ಶೇಕಡ 9 ರಂತೆ, ಮಾರನೆಯ ಒಂದು ವರ್ಷ ಶೇಕಡ 10 ರಂತೆ; ಮುನ್ನಡೆದಂತೆ ಶೇಕಡ 12ರ ಪ್ರಮಾಣದಲ್ಲಿ 12 ವರ್ಷಗಳು ನಿರಂತರವಾಗಿ; ಮುಂದಿನ ಮೂರು ವರ್ಷಗಳು ಶೇಕಡ 15 ರಂತೆ ಮರುವರ್ಷ ಶೇಕಡ 20 ಅದರ ಮುಂದಿನ ವರ್ಷ ಶೇಕಡ 21 ರಂತೆ 1998-99ರಲ್ಲಿ ಶೇಕಡ 16ಕ್ಕೆ ಕುಸಿದ ಲಾಭಾಂಶ ಪ್ರಕಟ, ಮಾರನೆಯ ವರ್ಷಗಳು ಗರಿಷ್ಠ ಎನ್ನುವಂತೆ ಶೇಕಡ 25ರ ಪ್ರಮಾಣದಲ್ಲಿ ಲಾಭಾಂಶ ಪ್ರಕಟಿಸಿತು. 2002-03ರ ಸಾಲಿನಲ್ಲಿ ಲಾಭಾಂಶ ಪ್ರಕಟ ಶೇಕಡ 20ಕ್ಕೆ ನಿಗದಿ ಆದ ಮೇಲೆ, 2005-06 ಮತ್ತು 2008-09 ಹಾಗೂ 2009-10ರನ್ನು ಹೊರತು ಪಡಿಸಿದರೆ ಉಳಿದಂತೆ 2013-14ನೇ ಸಾಲಿನ ವರೆಗೂ ನಿರಂತರವಾಗಿ ಶೇಕಡ 20 ಪ್ರಮಾಣದಲ್ಲಿ ಲಾಭಾಂಶ ಘೋಷಿಸಲಾಗಿದೆ.

21-7-1991ರಂದು ಶ್ರೀ ಪುಂಡಲೀಕ ಹಾಲಂಬಿ ಅವರು ಹೋಟಲ್ ಉದ್ಯಮದಾರರ ಸಹಕಾರ ಬ್ಯಾಂಕಿನ ನಿರ್ದೇಶಕರಾಗಿ ಪದಾರ್ಪಣ ಮಾಡಿ ನಂತರದ ದಿನಗಳಲ್ಲಿ ಗೌರವ ಕಾರ್ಯದರ್ಶಿ ಸ್ಥಾನ ಸ್ವೀಕರಿಸಿ, ಬ್ಯಾಂಕಿನ ಎಲ್ಲ ವ್ಯವಹಾರವನ್ನು ಕರತಲಾಮಲಕ ಮಾಡಿಕೊಂಡರು. 1998-99ನೇ ಸಾಲಿನಲ್ಲಿ ಬ್ಯಾಂಕಿನ ಅಧ್ಯಕ್ಷ ಸ್ಥಾನ ಅಲಂಕರಿಸಿದರು. ಅಂದಿನಿಂದ ಇಂದಿನವರೆಗೂ ಸತತ 16 ವರ್ಷಗಳಿಂದ ಶ್ರೀಯುತರೇ ಅನಭಿಷಿಕ್ತ ದೊರೆಯಾಗಿ ಕಾರ್ಯಭಾರ ನಿರ್ವಹಿಸುತ್ತಿದ್ದಾರೆ. ಬ್ಯಾಂಕಿನ 48 ವರ್ಷಗಳ ಈ ವರೆಗಿನ ಅವಧಿಯಲ್ಲಿ ಶ್ರೀಯುತರ ಆಡಳಿತಾವಧಿ 16 ವರ್ಷಗಳಾಗಿದ್ದು ಅದು ಬಾಳಿಕೆ ದಿನಮಾನಗಳಲ್ಲಿ ಮೂರನೇ ಒಂದು ಭಾಗದಷ್ಟಾಗಿದೆ. ಬ್ಯಾಂಕ್ ಇವರ ಆಗಮನದಿಂದಾಗಿ ಮರುಪೂರಣಗೊಂಡ ರಕ್ತನಾಳದಂತಾಗಿ ಪಾದರಸದಂತೆ ತನ್ನ ಕಾರ್ಯಕ್ಷಮತೆಯನ್ನು ತೋರಗೊಟ್ಟಿದೆ. ಇವರು ಅಧ್ಯಕ್ಷ ಸ್ಥಾನ ಅಲಂಕರಿಸಿದ ಸಂದರ್ಭ 41 ಲಕ್ಷ 66 ಸಾವಿರಕ್ಕೂ ಅಧಿಕ ನಿವ್ವಳ ಲಾಭ ಗಳಿಸಿತ್ತು. ಅದನ್ನು ಪ್ರಸ್ತುತ 7 ಕೋಟಿ 33 ಲಕ್ಷಕ್ಕೆ ಅಧಿಕಗೊಳಿಸಿರುವುದು ಇವರ ಆಡಳಿತ ದಕ್ಷತೆಗೆ ಜೀವಂತ ಸಾಕ್ಷಿಯಾಗಿದೆ.

ಸಹಕಾರ ಬ್ಯಾಂಕಿನ ಏರುಗತಿಯ ಊರ್ಧ್ವ ಮುಖದ ಬೆಳವಣಿಗೆಯನ್ನು ಸಾಕ್ಷೀಕರಿಸಲು ಅಗತ್ಯ ತಖ್ತೆಗಳನ್ನು ಇದೇ ಅಂತರ್ಜಾಲದಲ್ಲಿ ಬಿತ್ತರಿಸಲಾಗಿದೆ. ಜಂಟಿ ಜಾಮೀನು ಸಾಲ, ಸ್ಥಿರಾಸ್ತಿ ಸಾಲ, ಅಡಮಾನ ಸಾಲ, ಉನ್ನತ ಶಿಕ್ಷಣ ಸಾಲ ಜತೆಗೆ ಮಹಿಳಾ ಸ್ವ-ಉದ್ಯೋಗ ಸಾಲ ನೀಡುವುದರೊಂದಿಗೆ ಸಾಮಾಜಿಕ ನ್ಯಾಯ ಒದಗಿಸಲಾಗುತ್ತದೆ. ಬ್ಯಾಂಕ್ ನಡೆಸುವ ಸರ್ವ ಸದಸ್ಯರ ಸಭೆಗಳು ಕೇವಲ ಸಭೆಗಳಂತಾಗದೆ ಅತ್ಯುತ್ತಮ ಮಾದರಿ ಕಾರ್ಯಕ್ರಮಗಳಂತೆ ಜರುಗುತ್ತವೆ; ಬ್ಯಾಂಕಿನ ಸದಸ್ಯರ ಬುದ್ಧಿವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಯೋಜನೆ ಜಾರಿಯಲ್ಲಿರುತ್ತದೆ. ಸದಸ್ಯರು ನಿಧನ ಹೊಂದಿದರೆ ತುರ್ತು ನಿಧಿಯಾಗಿ 20 ಸಾವಿರ ರೂಪಾಯಿಗಳನ್ನು ಮರಣೋತ್ತರವಾಗಿ ವಿತರಿಸುತ್ತದೆ, ಗಂಭೀರತರ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸದಸ್ಯರುಗಳಿಗೆ ವೈದ್ಯಕೀಯ ನೆರವು ರೂಪದಲ್ಲಿ ಗರಿಷ್ಠ ರೂ. 25ಸಾವಿರಗಳವರೆಗೆ ಬ್ಯಾಂಕ್ ನೀಡುತ್ತದೆ.

ಬ್ಯಾಂಕ್ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಇತರೆ ಬ್ಯಾಂಕ್ ಗಳಂತೆಯೆ ಅತ್ಯಾಧುನಿಕ ತಂತ್ರಜ್ಞಾನವನ್ನು ನಮ್ಮ ಬ್ಯಾಂಕ್ ಸಹ ಅಳವಡಿಸಿಕೊಂಡಿದೆ. ಎಲ್ಲಾ ಶಾಖೆಗಳೂ ಪೂರ್ಣ ಗಣಕೀಕೃತಗೊಂಡು ಯಾವುದೇ ಶಾಖಾ ಬ್ಯಾಂಕಿಂಗ್ ವ್ಯವಸ್ಥೆ (ABB)ಯನ್ನು ಒಳಗೊಂಡಿರುತ್ತದೆ. ಹೊಸಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳಲು ಸದಾ ತೆರೆದ ಮನಸ್ಸಿನಿಂದ, ಶಿಸ್ತಿನ ಸಿಪಾಯಿಯಂತೆ ಸಜ್ಜಾಗಿ ನಿಂತಿದೆ. ದಕ್ಷ ಪ್ರಾಮಾಣಿಕ ಕಾರ್ಯಶೀಲವೇ ನಮ್ಮ ಬ್ಯಾಂಕಿನ ಮುನ್ನಡೆಗೆ ಕಾರಣವಾಗಿದೆ. "ಸಹಕಾರವೇ ಸರ್ವೋತ್ಕೃಷ್ಟ ಸಾಧನ" ಎಂಬ ಧೇಯ ವಾಕ್ಯವೇ ಈ ಬ್ಯಾಂಕಿನ ಶ್ರೀರಕ್ಷೆಯಾಗಿದೆ.